ಬೀಟಲ್ಸ್
1960ರ ದಶಕದಲ್ಲಿ ಪ್ರಖ್ಯಾತವಾಗಿದ್ದ ಒಂದು ಸಂಗೀತ ಪಂಥ. ರಾಕ್ ಎನ್ ರೋಲ್ ಸಂಗೀತ ನೃತ್ಯ ಅಮೆರಿಕದಿಂದ ಇಂಗ್ಲೆಂಡಿಗೆ 1954ರಲ್ಲಿ ಪದಾರ್ಪಣ ಮಾಡಿತ್ತು. ಇದಕ್ಕೆ ಪ್ರತಿಧ್ವನಿ ಎನಿಸುವಂಥ ವೈವಿಧ್ಯಮಯ ಬೀಟಲ್ ಸಂಗೀತ ಆರಂಭಿಸಿದವ ಜಾನ್ ಲೆನನ್. ಮೊದಲಿಗೆ ಲಿವರ್ ಪೂಲ್‍ನಲ್ಲಿ ಈ ಸಂಗೀತ ಗುಂಪು ಹುಟ್ಟಿಕೊಂಡಿತು. ಪಾಲ್ ಮೆಕಾಟ್ರ್ನಿ ಮತ್ತು ಜಾನ್ ಲೆನನ್ ಇಬ್ಬರೂ ಸೇರಿ 1956ರಲ್ಲಿ ಒಂದು ಸಂಗೀತ ಕಾರ್ಯಕ್ರಮ ಕೊಟ್ಟರು. 1958ರಲ್ಲಿ ಜಾರ್ಜ್ ಹ್ಯಾರಿಸನ್, 1962ರಲ್ಲಿ ರಿಂಗೊಸ್ಟಾರ್ ಈ ಗುಂಪಿನಲ್ಲಿ ಸೇರಿಕೊಂಡರು.

ಈ ತಂಡದಲ್ಲಿ ರಿಂಗೊಸ್ಟಾರ್ ಡ್ರಮ್ ಬಾರಿಸಿದರೆ ಉಳಿದವರು ಎಲೆಕ್ಟ್ರಿಕ್ ಗಿಟಾರ್ ನುಡಿಸುತ್ತಿದ್ದರು. ಬ್ರಿಟಿಷ್ ರಾಜಕುಟುಂಬದ ಎದುರು ಲಂಡನ್ನಿನಲ್ಲಿ (1963) ಇವರು ಕೊಟ್ಟ ಒಂದು ಕಾರ್ಯಕ್ರಮ ಬೀಟಲ್ಸ್ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿತು. ಅಮೆರಿಕದಲ್ಲಿ 1964ರಲ್ಲಿ ಈ ಗುಂಪು ಕಾಣಿಸಿಕೊಂಡು ಜನಮನವನ್ನು ಸೂರೆಗೊಂಡಿತು. ಎ ಹಾರ್ಡ್‍ಡೇಸ್ (1964), ಹೆಲ್ಪ್ (1965) ಎಂಬ ಎರಡು ಚಲನಚಿತ್ರಗಳಿಂದಾಗಿ ಇವರ ಕೀರ್ತಿ ಎಲ್ಲ ಕಡೆ ಹರಡಿತು. ಈ ಗುಂಪು 1966ರ ಅನಂತರ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಾಗಿ ಧ್ವನಿ ಮುದ್ರಿಕೆಗಳತ್ತ ಗಮನಹರಿಸಿತು. ಇವರ ಹಾಡುಗಳ ಸುಮಾರು 30 ಕೋಟಿ ಧ್ವನಿಮುದ್ರಿಕೆಗಳು ಮಾರಾಟವಾದುವು. ಜನಪ್ರಿಯತೆ, ಹಣ ಎರಡೂ ಇವರಿಗೆ ಸಮೃದ್ಧವಾಗಿ ದೊರೆತವು. ಆದರೆ ಸ್ವಲ್ಪ ದಿನಗಳಲ್ಲಿಯೇ ಗುಂಪಿನಲ್ಲಿ ಒಡಕುಂಟಾಯಿತು. ಮೊದಲು ಪಾಲ್ ಮೆಕಾಟ್ರ್ನಿ ತಂಡದಿಂದ ಬೇರೆಯಾದ. ಅನಂತರ ಉಳಿದವರು ತಮ್ಮ ತಮ್ಮ ದಾರಿ ಹಿಡಿದರು. ತಂಡದ ಚಟುವಟಿಕೆಗಳು ಅಲ್ಲಿಗೇ ಕೊನೆಗೊಂಡವು.							
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ